ಭಾರತದಲ್ಲಿ ಬಿಡುಗಡೆ ಆಗುತ್ತಿದೆ ಪಾಕಿಸ್ತಾನದ ಸೂಪರ್ ಹಿಟ್ ಸಿನಿಮಾ
ಫವಾದ್ ಖಾನ್ ನಟಿಸಿರುವ 'ಮೌಲಾ ಜಟ್' ಹೆಸರಿನ ಪಾಕಿಸ್ತಾನಿ ಸಿನಿಮಾ ಡಿಸೆಂಬರ್ 30 ರಂದು ಭಾರತದಲ್ಲಿ ಬಿಡುಗಡೆ ಆಗುತ್ತಿದೆ. ಪಂಜಾಬ್ ಹಾಗೂ ದೆಹಲಿಯ ಕೆಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ.
'ಮೌಲಾ ಜಟ್' ಸಿನಿಮಾವು 1979 ರ ಅದೇ ಹೆಸರಿನ ಪಾಕಿಸ್ತಾನಿ ಸಿನಿಮಾದ ರೀಮೇಕ್ ಆಗಿದ್ದು, ಪಾಕಿಸ್ತಾನದಲ್ಲಿ ಇದೇ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಿತ್ತು. 45 ಕೋಟಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಪಾಕಿಸ್ತಾನ ಹಾಗೂ ಇತರೆ ದೇಶಗಳಲ್ಲಿ ಸುಮಾರು 200 ಕೋಟಿ ಗಳಿಸಿ ಸೂಪರ್ ಹಿಟ್ ಆಗಿದೆ. ಇದೀಗ ಭಾರತದಲ್ಲಿ ಬಿಡುಗಡೆ ಆಗಲಿದ್ದು, ಇಲ್ಲಿಯೂ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಐನಾಕ್ಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನಿ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ದಶಕದ ಹಿಂದೆ ಹಲವು ಪಾಕಿಸ್ತಾನಿ ಸಿನಿಮಾಗಳು ಭಾರತದಲ್ಲಿ ಬಿಡುಗಡೆ ಆಗಿದ್ದವು. ಇತ್ತೀಚೆಗೆ ಸಹ ಪಾಕಿಸ್ತಾನದ ಕೆಲವು ಸಿನಿಮಾಗಳು ಭಾರತದಲ್ಲಿ ನಡೆವ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದಿದೆ. ಇದೀಗ ಕಮರ್ಷಿಯಲ್ ಸಿನಿಮಾ ಒಂದು ಬಿಡುಗಡೆ ಆಗುತ್ತಿದೆ.
ಇನ್ನು 'ಮೌಲಾ ಜಟ್' ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿರುವ ಫವಾದ್ ಖಾನ್, ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕಪೂರ್ ಆಂಡ್ ಸನ್ಸ್', 'ಏ ದಿಲ್ ಹೇ ಮುಷ್ಕಿಲ್', 'ಕುಬ್‌ಸೂರತ್', ಶಾರುಖ್ ಖಾನ್ ನಟನೆಯ 'ರಯೀಸ್' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಭಾರತದ ಬಹುತೇಕ ಹಿಟ್ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗುತ್ತಲೇ ಬಂದಿವೆ. ಹಲವು ದಶಕಗಳಿಂದಲೂ ಭಾರತದ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ಬಹುದೊಡ್ಡ ಬೇಡಿಕೆ ಹಾಗೂ ಮಾರುಕಟ್ಟೆ ಇದೆ. ಆದರೆ ಎರಡೂ ದೇಶಗಳ ರಾಜತಾಂತ್ರಿಕ ಕಾರಣಗಳಿಂದಾಗಿ ಪರಸ್ಪರ ದೇಶಗಳ ಸಿನಿಮಾಗಳು ಬಿಡುಗಡೆ ಆಗುವುದು ಇತ್ತೀಚೆಗೆ ಕಡಿಮೆಯಾಗಿದೆ.
.webp)
Comments
Post a Comment